ದೀಕ್ಷಾಸ್ನಾನ
ಕ್ರೈಸ್ತ ಧಾರ್ಮಿಕ ವಿಧಿಯಲ್ಲಿ ದೀಕ್ಷಾಸ್ನಾನವೆಂದರೆ (ಬ್ಯಾಷ್ಟಿಸಂ) ಸಂಸ್ಕಾರಯುಕ್ತವಾದ ತೊಳೆಯುವಿಕೆ. ಇದು ಕ್ರೈಸ್ತಧರ್ಮಕ್ಕಿಂತ ಮೊದಲೇ ಯಹೂದೀ ಧರ್ಮದಲ್ಲಿ ರೂಢಿಯಲ್ಲಿತ್ತೆಂದು ಸ್ನಾನಿಕ ಯೋಹಾನನ ದೀಕ್ಷಾಸ್ನಾನದಿಂದ ನಮಗೆ ತಿಳಿದುಬರುತ್ತದೆ.  ಯೇಸುಕ್ರಿಸ್ತ ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ.  ಆದಿ ಕ್ರೈಸ್ತರು ಕೂಡ ತಾವು ಕ್ರೈಸ್ತಧರ್ಮದ ದೀಕ್ಷೆಯನ್ನು ತೆಗೆದುಕೊಂಡದ್ದರ ಗುರುತಿಗಾಗಿ ಇದನ್ನು ಕೈಕೊಳ್ಳುತ್ತಿದ್ದರು.  

ಕ್ರೈಸ್ತರಿಗೆ ದೀಕ್ಷಾಸ್ನಾನ ಒಂದು ಪವಿತ್ರ ಪ್ರಸಾದವಾಗಿದೆ.  ಅಂದರೆ ದಿವ್ಯ ವಚನವೂ (ದೇವವಾಣಿ) ದೇವರ ಕೃಪಾವರಕ್ಕೆ ಸದೃಶವಾದ  ವಸ್ತುವೂ (ನೀರು) ಕೂಡಿರುವ ಸಂಸ್ಕಾರವಿದು. ಇದನ್ನು ಹೊಂದುವವರಿಗೆ ತಂದೆಯಾಗಿರುವ ದೇವರು.  ಮಗನೂ ಪ್ರವಿತ್ರಾತ್ಮನೂ ಸಹಿತವಾಗಿ - ನಾನು ನಿನಗೆ ಪ್ರಸನ್ನನಾಗಿ ಯೇಸುಕ್ರಿಸ್ತನ ನಿಮಿತ್ತ ಕೇವಲ ಕೃಪೆಯಿಂದ ಎಲ್ಲ ಪಾಪಗಳನ್ನೂ ಕ್ಷಮಿಸಿ.  ದೇವರು ಮಗವೆಂದು ಸ್ವೀಕರಿಸಿ ಪರಲೋಕದ ಆಸ್ತಿಗೆಲ್ಲ ಬಾಧ್ಯಸ್ಥನನ್ನಾಗಿ ಮಾಡುತ್ತೇನೆಂದು - ನಿಶ್ಚಯಪಡಿಸುತ್ತಾನೆ.  ದೀಕ್ಷಾಸ್ನಾನದಿಂದ ದೇವರ ಕೃಪೆಯೂ ಪಾಪಗಳ ಪರಿಹಾರವೂ ದೇವರ ಮಕ್ಕಳಾಗುವ ಅಧಿಕಾರವೂ ನಿತ್ಯಜೀವನದ ಭಾದ್ಯತೆಯೂ ನಿಶ್ಚಯವಾಗುವುದೆಂದು ಕ್ರೈಸ್ತರು ನಂಬುತ್ತಾರೆ.  

ಹೊಸ ಒಡಂಬಡಿಕೆಯ ಆಧಾರದ ಮೇರೆಗೆ ದೀಕ್ಷಾಸ್ನಾನದ ತತ್ತ್ವವನ್ನು ಈ ರೀತಿಯಲ್ಲಿ ಹೇಳಬಹುದು;

(1)  ಅದು ಕ್ರೈಸ್ತ ಸಭೆಯಲ್ಲಿ ಸಹಭಾಗತ್ವ ಹೊಂದಿರುವುದನ್ನು ದೃಢೀಕರಿಸುತ್ತದೆ.  

(2)  ಜೀವನದಲ್ಲಿ ಮಾಡಿದ ಪಾಪಕ್ಕೋಸ್ಕರ ಪಶ್ಚಾತ್ತಾಪಪಟ್ಟು ಹೊಸದಾಗಿ ಪ್ರಾರಂಭಸಿದ ನವಜೀವನದ ಅಡಿಗಲ್ಲೂ ಅದಾಗಿರುತ್ತದೆ.

ಮಕ್ಕಳ ದೀಕ್ಷಾಸ್ನಾನವನ್ನು ಕುರಿತು ಹೊಸ ಒಡಂಬಡಿಕೆಯಲ್ಲಿ ಸ್ಪಷ್ಟವಾದ ಸೂಚನೆ ಇಲ್ಲದಿದ್ದರೂ ಯೇಸುಕ್ರಿಸ್ತ ಮಕ್ಕಳನ್ನು ಆಶೀರ್ವದಿಸಿ ಅವರಿಗೂ ದೇವರ ರಾಜ್ಯದಲ್ಲಿ ಪಾಲಿದೆ ಎಂದು ಸೂಚಿಸಿದ್ದನ್ನು ನಾವು ನೋಡುತ್ತೇನೆ (ಮಾರ್ಕ್). ಯಹೂದ್ಯರು ಕುಟುಂಬವನ್ನು ಒಂದು ಸಮಷ್ಟಿ ಎಂದು ಭಾವಿಸುತ್ತಿದ್ದರಷ್ಟೆ.  ಇದೇ ಭಾವನೆ ಕ್ರೈಸ್ತರಲ್ಲಿಯೂ ಇದ್ದು ಯಹೂದ್ಯರಲ್ಲಿದ್ದ ಸುನ್ನತಿಯ ಬದಲು ದೀಕ್ಷಾಸ್ನಾನವನ್ನು ಕ್ರೈಸ್ತ ಸಭೆಯಲ್ಲಿ ಆಚರಿಸುತ್ತಿದ್ದರು.  
ದೀಕ್ಷಾಸ್ನಾನ ಹೊಂದುವ ವ್ಯಕ್ತಿ ಮೊದಲು ಕ್ರಿಸ್ತನನ್ನು ನಂಬಬೇಕೆಂಬ ತತ್ತ್ವವನ್ನು ಪಾಲ್ ಮುಂದಿಡುತ್ತಾನೆ.  ಅದೇ ಪಾಲನ ಮಾತಿನ ಪ್ರಕಾರ ದೀಕ್ಷಾಸ್ನಾನ ಹೊಂದಿದ ವ್ಯಕ್ತಿ ಕ್ರಿಸ್ತನೊಂದಿಗೆ ಸತ್ತು.  ಹೂಣಲ್ಪಟ್ಟು, ಪುನರುತ್ಥಾನ ಹೊಂದಿದವನಾಗಿರುತ್ತಾನೆ.
(ಡಿ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ